Breaking
2 Aug 2025, Sat

ಶಂಭೂರು ಶಾಲಾ 98 ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಬಂಟ್ವಾಳ : ಸರಕಾರಿ ಶಾಲೆಗಳು ಬೆಳೆಯಲು ಜಾತಿ, ಮತ, ಪಂಥ, ಪಕ್ಷ ಬೇಧ ಮರೆತು ಊರವರು, ಪಾಲಕರು ಮತ್ತು ಹಿರಿಯ ವಿದ್ಯಾರ್ಥಿಗಳು ಜೊತೆ ಜೊತೆಯಾಗಿ ಸಹಕರಿಸಿ ಒಗ್ಗಟ್ಟಿನಿಂದ ದುಡಿಯಬೇಕು. ವೈಯಕ್ತಿಕ ಮೇಲ್ಮೆಗಾಗಿ ಹಾತೊರೆಯುವಿಕೆ ಸಲ್ಲದು. ವಿದ್ಯಾರ್ಥಿಗಳನ್ನು ರಾಷ್ಟ್ರದ ಭವ್ಯ ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನರಿಕೊಂಬು ಗ್ರಾಮ ಪಂಚಾಯತ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 98 ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭಾ ಕಾರ್ಯ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಸಂಜೀವ ಪೂಜಾರಿ ಮಕ್ಕಳ ಸಾಧನೆಯನ್ನು ಜಗತ್ತಿಗೆ ಪರಿಚಯಿಸಲು ಎಲ್ಲರೂ ಹೊಣೆ ಹೊರಬೇಕು. ಮೌಲ್ಯಯುತ ಸಮಾಜಕ್ಕೆ ಗುಣ ಮಟ್ಟದ ಶಿಕ್ಷಣವೇ ಬುನಾದಿ ಎಂದರು.

ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ ಎಂ ಬಾಯಾರು ಮಾತನಾಡಿ ಅಮ್ಮನ ಮಮಕಾರ ಅಪ್ಪನ ಅಧಿಕಾರ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ. ಅತಿ ಪ್ರೀತಿ ಮತ್ತು ಅಧಿಕಾರಗಳು ಮಕ್ಕಳ ಸ್ವಾವಲಂಬನೆ ಮತ್ತುಸಾಧನಾ ಮಾರ್ಗಗಳಿಗೆ ಅಡಚಣೆಯಾಗುವುದೂ ಇದೆ. ಹೆತ್ತವರು ಮಕ್ಕಳ ಸಾಧನಾ ಬಯಕೆಗಳಿಗೆ ಬೇಡ ಎಂಬ ಮುದ್ರೆ ಒತ್ತದೆ ಉತ್ತೇಜಿಸಬೇಕು. ಮನೆಯ ಪಾಕಶಾಲೆ ಮಕ್ಕಳಲ್ಲಿ ಮೌಲ್ಯ ತುಂಬುವ ಪಾಠ ಶಾಲೆಯೂ ಆಗಬೇಕು ಎಂದರು.

ಸಾಧಕರಾದ ರಮೇಶ ಎಂ ಬಾಯಾರು, ಕೆ. ಸಂಜೀವ ಪೂಜಾರಿ,ಇವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ ಹೆನ್ರಿ ಬುಕ್ಕೆಲ್ಲೊ, ಯಕ್ಷಗಾನ ನಾಟ್ಯ ಗುರು ಜಗನ್ನಾಥ್ ಸಣ್ಣಕುಕ್ಕು ಇವರನ್ನು ಗೌರವಿಸಲಾಯಿತು.

ವಿವಿಧ ಸ್ಪರ್ಧೆಗಳ ವಿಜೇತರು, ಸಾದಕರು ಮತ್ತು ಕಲಿಕಾ ಸಾಧಕ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಶಿಕ್ಷಕ ಶಿಕ್ಷಕಿಯರು, ಪಾಲಕರನ್ನು ಬಹುಮಾನಿಸಿ ಪುರಸ್ಕರಿಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ.ಯ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ,ಕಡೇಶಿವಾಲಯ ಪಿ.ಡಿ.ಒ ಸುನಿಲ್‌ ಕುಮಾರ್‌, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶೈಲೇಶ್‌ ಪೂಜಾರಿ ಕುಚ್ಚಿಗುಡ್ಡೆ, ಕರ್ನಾಟಕ ಫುಡ್‌ ಕಮಿಷನ್‌ ಮೆಂಬರ್‌ ಸುಮಂತರಾವ್‌, ಸಾಮಾಜಿಕ ಕಾರ್ಯ ಕರ್ತ ಆನಂದ ಎ ಶಂಭೂರು, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ, ಮಂಗಳೂರು ಮಹಾ ನಗರಪಾಲಿಕೆಯ ಕಾರ್ಪೋರೇಟರ್ ಸುಮಂಗಳ ರಾವ್‌ ಗುತ್ತಿಗೆದಾರರಾದ ಸುದರ್ಶನ್‌ ಬಜ, ಪ್ರಸಾದ ಭಂಡಾರದಮನೆ, ಕೃಷ್ಣಪ್ಪ ನಾಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಜಯರಾಮ್ ಡಿ ಪಡ್ರೆ ಸ್ವಾಗತಿಸಿ,ಶಿಕ್ಷಕಿ ಚಿತ್ರ ಕೆ ವರದಿ ವಾಚಿಸಿ, ಶಿಕ್ಷಕ ಪವನ್ ರಾಜ್ ಸನ್ಮಾನ ಪತ್ರ ವಾಚಿಸಿ,ಶಿಕ್ಷಕಿ ಜಯಂತಿ ವಂದಿಸಿ,ಶಿಕ್ಷಕ ಮದು ಸೂದನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿರಾದ ಇಂದಿರಾ, ದಯಾವತಿ, ಜ್ಯೋತಿ, ಮೀನಾಕ್ಷಿ,ಮಾಲಾಶ್ರೀ, ಉಷಾ, ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ ವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡುವು. ಶಾಲಾ ಮುಖ್ಯ ಶಿಕ್ಷಕ ಜಯರಾಮ್ ಪಡ್ರೆ ಅವರ ಭಾಗವತಿಯಲ್ಲಿ ನಡೆದ ಶಾಲಾ ಮಕ್ಕಳ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು. ಶಾಲೆಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು, ವಾರ್ಷಿಕೋತ್ಸವದ ನಿಮಿತ್ತ ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *