Breaking
9 May 2026, Sat

ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬೀಗ ಹಾಕಿದ ಮನೆಯಿಂದ ಬೆಲೆಬಾಳುವ ವಸ್ತುಗಳು ಹಾಗೂ ದೈವದ ಮೂರ್ತಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಜ. 28ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಸೈಯದ್ ಅಲಿ (40) ಹಾಗೂ ಬಜ್ಪೆ ನಿವಾಸಿ ವಾಜಿದ್ ಜೆ ಅಲಿಯಾಸ್ ವಾಜಿ (27) ಎಂದು ಗುರುತಿಸಲಾಗಿದೆ.

ಡಿ. 26, 2025 ರಂದು ಕುಳಾಯಿ ಗ್ರಾಮದ ಯಶೋದಾ ಕ್ಲಿನಿಕ್ ಸಮೀಪದಲ್ಲಿರುವ ಸುರೇಶ್ ಹಾಗೂ ಅಮಿತಾ ಅವರಿಗೆ ಸೇರಿದ ಬೀಗ ಹಾಕಿದ ಮನೆಯಲ್ಲಿ ರಾತ್ರಿ ವೇಳೆ ಅಪರಿಚಿತರು ಮನೆಯ ಛಾವಣಿಯ ಹಂಚುಗಳನ್ನು ತೆರವುಗೊಳಿಸಿ ಒಳನುಗ್ಗಿ ಕಳ್ಳತನ ನಡೆಸಿದ್ದರು. ಈ ವೇಳೆ ಪಸಪ್ಪ ದೈವದ ತಾಮ್ರದ ವಿಗ್ರಹ, ಮಂತ್ರದೇವತೆಯ ಬೆಳ್ಳಿಯ ವಿಗ್ರಹ, ಕಲ್ಲುರ್ಟಿ ಪಂಜುರ್ಲಿಯ ತಾಮ್ರದ ವಿಗ್ರಹಗಳು, ಬೆಳ್ಳಿಯ ಕತ್ತಿ, ತಾಮ್ರದ ಗಂಟೆಗಳು, ತಾಮ್ರದ ಪಾತ್ರೆಗಳು ಹಾಗೂ ಎಲ್‌ಇಡಿ ಟಿವಿಯನ್ನು ಕದ್ದೊಯ್ದಿದ್ದರು.

ಆ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಪೂಜೆ ಹಾಗೂ ದೀಪ ಬೆಳಗಿಸಲು ಮಾತ್ರ ತೆರೆಯಲಾಗುತ್ತಿದ್ದು, ನಂತರ ಬೀಗ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಮಂತ್ರದೇವತೆಯ ಬೆಳ್ಳಿಯ ವಿಗ್ರಹ, ಬೆಳ್ಳಿಯ ಛತ್ರಿ ಹಾಗೂ ಕತ್ತಿ, ಹಿತ್ತಾಳೆ ಪೂಜಾ ವಸ್ತುಗಳು, ತಾಮ್ರದ ಪೂಜಾ ವಸ್ತುಗಳು, ಟಿವಿ ಮತ್ತು ಸೆಟ್-ಟಾಪ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಳ್ಳತನಕ್ಕೆ ಸಂಬಂಧಿಸಿದಂತೆ ಎರಡು ಮೊಬೈಲ್ ಫೋನ್‌ಗಳು ಹಾಗೂ ಒಂದು ಸ್ಕೂಟರ್‌ನ್ನೂ ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊಲೆ ಯತ್ನ, ದರೋಡೆ, ಮನೆ ಕಳ್ಳತನ, ದನ ಕಳ್ಳತನ ಹಾಗೂ ವಾಹನ ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

Leave a Reply

Your email address will not be published. Required fields are marked *