ಬಂಟ್ವಾಳ: ಎಲ್ ಐಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ಬೆಳ್ಳಿ ಹಬ್ಬದ ಪ್ರಯುಕ್ತ ಜ. 26 ರಂದು ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಎಲ್ ಐಸಿ ನಿವೃತ್ತ ಹಿರಿಯ ವಿಭಾಗೀಯ ಮೆನೇಜರ್ ಬಾಲಕೃಷ್ಣ ನಾಯ್ಕ್ ಅವರು ಕ್ರೀಡೆಯಿಂದ ಆರೋಗ್ಯ ವೃದ್ಧಿ ಜೊತೆಗೆ ಕ್ರೀಡಾ ಮನೋಭಾವದಿಂದ ವ್ಯಾವಹಾರಿಕ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಬಂಟ್ವಾಳ ಶಾಖೆ ಹಿರಿಯ ಮೆನೇಜರ್ ಗುರುದತ್ತ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಮೆನೇಜರ್ ಮುತ್ತಯ್ಯ ಮರಾಠೆ ಶುಭ ಹಾರೈಸಿದರು.
ಈ ವೇಳೆ ಬಂಟ್ವಾಳ ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಎಲ್ ಐಸಿ ಪ್ರತಿನಿಧಿಗಳ ವತಿಯಿಂದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕ್ರೀಡಾ ಸಂಚಾಲಕರಾದ ಸತ್ಯನಾರಾಯಣ ರೈ, ವೇದಾವತಿ, ಪ್ರೀತಿ ಹೆಗ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಸ್ವಾಗತಿಸಿ, ಬೆಳ್ಳಿಹಬ್ಬ ಸಂಚಾಲಕ ಲೂವಿಸ್ ಮಸ್ಕರೇನಸ್ ವಂದಿಸಿದರು. ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.



