Breaking
22 Sep 2026, Tue

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ, ಬಿಲ್ ಕಲೆಕ್ಟರ್

ಬಂಟ್ವಾಳ: ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ 10 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೆರುವಾಯಿ ಗ್ರಾಮಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಪೆರುವಾಯಿ ಗ್ರಾಮಕ್ಕೆ ಸಂಬಂಧ ಪಟ್ಟ ದೂರುದಾರರು ತಮ್ಮ ಜಾಗಕ್ಕೆ ಕೊಳವೆಬಾವಿ ಮಂಜೂರಾತಿಗಾಗಿ 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಬಳಿಕ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ದೂರುದಾರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ಫಿರ್ಯಾದಿದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ಗೆ ಹೋಗಿ ವಿಚಾರಿಸಿಕೊಂಡು ತಿಳಿಸಿದ್ದಾರೆ. ಈ ಹಿನ್ನಲೆ ಸೆ. 2 ರಂದು ಪೆರುವಾಯಿ ಗ್ರಾಮ ಪಂಚಾಯತ್ ಗೆ ಹೋಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ನಫೀಸಾ ರವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ ‘ನಿಮಗೆ ಬೋರ್ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್ ಗೆ ಹತ್ತು ಸಾವಿರ ಕೊಡ್ಲಿಕ್ಕೆ ಇದೆ, ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುತ್ತಾರೆ. ಫಿರ್ಯಾದಿದಾರರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಾಸು ಬಂದಿರುತ್ತಾರೆ.

ಪ0ಚಾಯತ್ ಅಧ್ಯಕ್ಷೆ ನಫೀಸಾ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್ವೆಲ್ ಹಾಕಿಸಿ ಕೊಡಲು ರೂ 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳಿಗೆ ಸಂತ್ರಸ್ತರು ದೂರು ನೀಡಿದ್ದು ಅದರಂತೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *