ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ 14ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮೃತಿ ಕಾರ್ಯಕ್ರಮ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಸುಶಿಕ್ಷಿತ ಹಾಗೂ ಸುಭದ್ರವಾಗಬೇಕಾದರೆ ಶಿಕ್ಷಣಕ್ಕಿಂತ ಮಹತ್ವದ ಶಕ್ತಿ ಬೇರೆ ಇಲ್ಲ. ವ್ಯಕ್ತಿಯ ವ್ಯಕ್ತಿತ್ವವನ್ನು ಮೇರುಸ್ಥಿತಿಗೆ ಒಯ್ಯುವ ಶಿಕ್ಷಣ ನಮ್ಮ ಜೀವನದ ಅತೀ ಪ್ರಾಮುಖ್ಯವಾದ ಅಂಶವಾಗಿದೆ. ಶಿಕ್ಷಣ ಇಲ್ಲದಿದ್ದರೆ ಬದುಕೇ ಇಲ್ಲ ಎಂಬ ಸ್ಥಿತಿ ಬರಲಿದೆ. ಹಾಗಾಗಿ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಇನ್ನು ಇಂದಿನ ಮಕ್ಕಳಿಗೆ ತಂದೆಯ ಮಹತ್ವವೇ ಗೊತ್ತಿಲ್ಲ. ಆದರೆ ಸವಣೂರು ಸೀತಾರಾಮ ರೈ ಅವರು ತನ್ನ ತಂದೆಯ ಕನಸುಗಳನ್ನು ನನಸುವ ಮಾಡುವ ಮೂಲಕ ತುಂಬಿದಕೊಡ’ವಾಗಿ ಪರಿವರ್ತಿತವಾಗಿದ್ದಾರೆ ಎಂದರು.

ಶೀಂಟೂರು ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ ಅವರು ಮಾತನಾಡಿ, ಬದುಕಿನಲ್ಲಿ ವಿದ್ಯೆ ಅತೀ ಮುಖ್ಯ. ಅಮೇರಿಕಾದಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸದಿದ್ದರೆ ಅವರ ತಂದೆತಾಯಿಗಳಿಗೆ ಶಿಕ್ಷೆ ನೀಡುತ್ತಾರೆ. ಅಂತಹ ಕಾನೂನು ಭಾರತದಲ್ಲಿಯೂ ಬರಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಮಾಜದ ಉನ್ನತಿಯಾಗಬೇಕಾದರೆ ಪೋಷಕರು ಮಿಲಿಟರಿಯೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಮಕ್ಕಳನ್ನು ಕಳುಹಿಸುವ ವ್ಯವಸ್ಥೆ ಅನುಷ್ಟಾನವಾಗಬೇಕು. ಮಕ್ಕಳನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲಿಷ್ಠಗೊಳಿಸಿದಾಗ ದೇಶಭಕ್ತಿ-ದೇಶಪ್ರೇಮದ ಜತೆಗೆ ಪ್ರಾಮಾಣಿಕತೆಯ ಚಿಂತನೆ ಹೆಚ್ಚಾಗುತ್ತದೆ ಎಂದರು.
ನಿವೃತ್ತ ಯೋಧ ಕರ್ನಲ್ ರಾಜೇಶ್ ಹೊಳ್ಳ ಅವರಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರಿ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಸನ್ಮಾನಿಸಿ ಮಾತನಾಡಿದರು.ಸವಣೂರು ಸೀತಾರಾಮ ರೈ ಅವರು ಶೀಂಟೂರು ಶಿಷ್ಯವೇತನ ವಿತರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ನ್ಯಾಯವಾದಿ ಅಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಸೀತಾರಾಮ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಸವಣೂರು ಸೀತಾರಾಮ ರೈ,ಅವರ ಪತ್ನಿ ಕಸ್ತೂರಿ ಎಸ್ ರೈ, ಶೀಂಟೂರು ಸಂಸ್ಮರಣೆ ಮಾಡಿದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ,ಮಮತಾ ರೈ ಡಿಂಬ್ರಿ, ರಶ್ಮೀ ಅಶ್ವಿನ್ ಶೆಟ್ಟಿ, ಎನ್.ಜಯಪ್ರಕಾಶ್ ರೈ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮಿ ಎಸ್.ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಉಪನ್ಯಾಸಕಿ ಸುಮಾ ಎಸ್, ಶಿಕ್ಷಕಿಯರಾದ ಚೇತನಾ, ಲಿಖಿತಾ ಎಂ.ಎನ್, ಉಪನ್ಯಾಸಕಿ ಪ್ರತಿಭಾ ಎಸ್.ಉಪಸ್ಥಿತರಿದ್ದರು.


