Breaking
5 Oct 2026, Mon

ಚಾರ್ಮಾಡಿ ಘಾಟ್ ಅಭಿವೃದ್ಧಿಗೆ ಮುನ್ನ ವೈಜ್ಞಾನಿಕ ಅಧ್ಯಯನ ಅಗತ್ಯ: ಶೇಖರ್ ಎಲ್

ಬೆಳ್ತಂಗಡಿ: ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ಗುಡ್ಡ ಕುಸಿತ, ಕಾಡುಪ್ರಾಣಿಗಳ ಉಪಟಳ ಸೇರಿದಂತೆ ಹಲವು ಅಪಾಯಕಾರಿ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಎಲ್ ಆಗ್ರಹಿಸಿದ್ದಾರೆ.

ಘಾಟ್ ಪ್ರದೇಶದ ಅಭಿವೃದ್ಧಿಯ ಜೊತೆಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯಕಾರಿ ದುರಂತಗಳ ಬಗ್ಗೆಯೂ ಅಧ್ಯಯನ ನಡೆಸುವ ಅಗತ್ಯವಿದೆ. ಕೇರಳದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಭವಿಸಿದ ವಯನಾಡ್ ದುರಂತ ನಮ್ಮ ಕಣ್ಣ ಮುಂದಿರುವಾಗ, ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಗುಡ್ಡಗಳ ತೆರವು, ಕಲ್ಲುಗಳ ತೆರವು ಹಾಗೂ ಸಾವಿರಾರು ಮರಗಳ ಕಡಿತದಂತಹ ಕಾಮಗಾರಿಗಳು ಅಪಾಯಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.

ದೈತ್ಯ ಯಂತ್ರೋಪಕರಣಗಳ ಬಳಕೆಯಿಂದ ಮಣ್ಣಿನ ಸವಕಳಿ ಹೆಚ್ಚಾಗಿ ಮಳೆಗಾಲದಲ್ಲಿ ಗುಡ್ಡ ಕುಸಿತದ ಅಪಾಯ ಉಂಟಾಗಬಹುದು. ಅಲ್ಲದೆ, ಚಾರ್ಮಾಡಿ ಘಾಟ್ ಪ್ರದೇಶದಲ್ಲಿರುವ ಅಳಿವಿನಂಚಿನಲ್ಲಿರುವ ವಿವಿಧ ಸಸ್ಯ ಪ್ರಭೇದಗಳಿಗೂ ಹಾನಿಯಾಗುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದಿಂದ ಮಳೆ ಕೊರತೆ ಎದುರಾಗಿ ಬೆಳ್ತಂಗಡಿ ತಾಲೂಕನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಸರ್ಕಾರ ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ ವಿವಿಧ ಪ್ರಭೇದಗಳ ಕಾಡುಪ್ರಾಣಿಗಳು ವಾಸಿಸುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳಿಂದ ಅವುಗಳ ವಾಸಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆಯ ಸಂದರ್ಭದಲ್ಲಿ ಪೆರಿಯಶಾಂತಿ, ಶಿರಾಡಿ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಆನೆಗಳ ಸಂಚಾರ ಮಾರ್ಗ ಬದಲಾಗಿದ್ದು, ಕೊಕ್ಕಡ, ಶಿಬಾಜೆ ಭಾಗಗಳಲ್ಲಿ ಕಾಡಾನೆಗಳ ದಾಳಿ ಹಾಗೂ ಪ್ರಾಣಹಾನಿ ಸಂಭವಿಸಿದೆ ಎಂದು ಶೇಖರ್ ಎಲ್ ಆರೋಪಿಸಿದ್ದಾರೆ.

ಇದೇ ರೀತಿಯ ಪರಿಸ್ಥಿತಿ ಚಾರ್ಮಾಡಿ ಘಾಟ್‌ನಲ್ಲೂ ಉಂಟಾಗಿ ಆನೆಗಳ ಸಂಚಾರ ಮಾರ್ಗ ಬದಲಾಗುವುದರಿಂದ ಮುಂದಿನ ದಿನಗಳಲ್ಲಿ ಕಾಡಾನೆ ದಾಳಿಗಳು ಹೆಚ್ಚಾಗುವ ಸಾಧ್ಯತೆಯಿದೆ. ಚಾರ್ಮಾಡಿ ಘಾಟ್ ಅಭಿವೃದ್ಧಿ ಅಗತ್ಯವಾದರೂ, ಪರಿಸರ ಮತ್ತು ವನ್ಯಜೀವಿಗಳ ಮೇಲೆ ಆಗುವ ಪರಿಣಾಮಗಳನ್ನು ಪರಿಗಣಿಸಿ ವೈಜ್ಞಾನಿಕ ಅಧ್ಯಯನ ನಡೆಸಿದ ಬಳಿಕವೇ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *