ಬಂಟ್ವಾಳ: ಆಹಾರ, ನಾಗರಿಕ ಸರಬುರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿರುವ ಪಡಿತರ ಅಕ್ಕಿಯು ಪದೇ ಪದೇ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ.

ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ತಲುಪದೇ ತುಂಬಾ ಅಡಚಣೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸರ್ವರ್ ತೊಂದರೆಯಿಂದ ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಾ ಪೂರ್ತಿಯಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ.

ಕೆಲವೊಂದು ಕಡೆಗಳಲ್ಲಿ ದಿನಾ ಪೂರ್ತಿ ಕಾದು ನಿಂತು ರಾತ್ರಿತನಕ ಕಾದರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಲಭಿಸದೆ ಮನೆಗೆ ವಾಪಾಸ್ ಹೋಗುತ್ತಿದ್ದಾರೆ.
ಸರಕಾರದ ಮಟ್ಟದಲ್ಲಿನ ಈ ರೀತಿಯ ತಾಂತ್ರಿಕ ಅಡಚಣೆಯಿಂದಾಗಿ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುವುದು ಕಂಡು ಬಂದಿದೆ.

ಸಂಬಂಧ ಪಟ್ಟ ಆಹಾರ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದೂ ಉತ್ತರ ನೀಡುತ್ತಿದ್ದು ಸಮರ್ಪಕ ಕಾರಣ ತಿಳಿಯುತ್ತಿಲ್ಲ.

ಇದೇ ರೀತಿಯ ಸರ್ವರ್ ಸಮಸ್ಯೆ ಮೇ ತಿಂಗಳಲ್ಲಿ ಉದ್ಭವವಾಗಿತ್ತು. ಇದೀಗ ಈ ಸರ್ವರ್ ಸಮಸ್ಯೆ ಮರುಕಳಿಸಿದೆ. ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿ ಪಡೆಯುವಲ್ಲಿ ವಂಚಿತರಾಗಬಹುದು.

ಈ ಹಿನ್ನೆಲೆಯಲ್ಲಿ ಅಗೋಸ್ಟ್ ತಿಂಗಳ ಪಡಿತರ ಅಕ್ಕಿಯನ್ನು ಸೆಪ್ಟೆಂಬರ್ ಮೊದಲ ವಾರದವರೆಗೂ ನೀಡಲು ಸೂಕ್ತ ಆದೇಶ ನೀಡಬೇಕು ಹಾಗೂ ಅನ್ನಭಾಗ್ಯ ಅಕ್ಕಿಯನ್ನು ಯಥಾವತ್ತಾಗಿ ತಿಂಗಳು ತಿಂಗಳು ನೀಡುವಂತೆ ಈ ಮೂಲಕ ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಲ್ಲಿ ಒತ್ತಾಯ ಪಡಿಸಲಾಗಿದೆ.


