Breaking
8 Oct 2026, Thu

ಬಿ.ಸಿ.ರೋಡಿನಲ್ಲಿ ₹22.59 ಕೋಟಿ ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ

ಬಂಟ್ವಾಳ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ವೇಗ ಮತ್ತು ಆದ್ಯತೆ ನೀಡಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನದ 25 ವರ್ಷಗಳ ಆಡಳಿತದ ಸಂಭ್ರಮದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮುಂದಿನ 15 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.


ಬಿ.ಸಿ.ರೋಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಗಾಣದಪಡ್ಪು ತನಕ ₹22.59 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶೀಘ್ರದಲ್ಲೇ ₹34.53 ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದು ಚೌಟ ತಿಳಿಸಿದರು.


ಬ್ರಹ್ಮರಕೂಟ್ಲು ಟೋಲ್ ಕೇಂದ್ರ ಬಂದ್
ಬಿ.ಸಿ.ರೋಡ್–ಬೆಂಗಳೂರು ಹಾಗೂ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಬ್ರಹ್ಮರಕೂಟ್ಲು ಟೋಲ್ ಕೇಂದ್ರ ಮುಚ್ಚಲಿದೆ ಎಂದು ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದರು.
ಈ ವಿಚಾರದಲ್ಲಿ ಯಾರೂ ರಾಜಕೀಯ ನಾಟಕ ಮಾಡುವ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಭೂಸಾರಿಗೆ ಸಚಿವರೊಂದಿಗೆ ಈ ಕುರಿತು ಮಾತುಕತೆ ನಡೆಸಲಾಗಿದೆ ಎಂದರು.


ಮಾಣಿ–ಸಂಪಾಜೆ ಚತುಷ್ಪಥಕ್ಕೆ ಡಿಪಿಆರ್
ಮಾಣಿ–ಸಂಪಾಜೆ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ₹50 ಕೋಟಿ ನಿರ್ವಹಣಾ ವೆಚ್ಚವನ್ನು ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದರು.


ತಲಪಾಡಿ–ಕುಂದಾಪುರ ನಡುವೆ ಸರ್ವೀಸ್ ರಸ್ತೆ
ತಲಪಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಗತ್ಯವಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆಯೂ ಇದೆ. ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಅಂಡರ್ಪಾಸ್, ಮೇಲ್ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.


ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮಾತನಾಡಿ, “ಬಿ.ಸಿ.ರೋಡಿನ ಬಹುವರ್ಷಗಳ ಬೇಡಿಕೆ ಈಡೇರಿಸುವುದಕ್ಕೆ ಸೂಕ್ತ ದಿನ ಕೂಡಿ ಬಂದಿದೆ” ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಕೆ. ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ವಿಕಾಸ್ ಪುತ್ತೂರು, ಸುಲೋಚನಾ ಜಿ.ಕೆ. ಭಟ್, ದಿನೇಶ್ ಅಮ್ಟೂರು, ಮಾಧವ ಮಾವೆ, ಎ. ಗೋವಿಂದ ಪ್ರಭು, ಬಿ. ದಿನೇಶ್ ಭಂಡಾರಿ, ಆರ್.ಸಿ. ನಾರಾಯಣ ರೆಂಜ, ಜನಾರ್ದನ ಬೊಂಡಾಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *